ಬಿಂಗಿಪದ -
ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ಧಾಪುರ, ಯಲ್ಲಾಪುರಗಳಲ್ಲಿ ಪ್ರಚಲಿತವಿರುವ ವಿಶಿಷ್ಟ ಜಾನಪದ ಕಲಾಸಂಪ್ರದಾಯ. ಇದಕ್ಕೆ ಹಬ್ಬ ಹಾಡುವುದು, ದೀಪನೀಡುವುದು, ಲಂಟಿಕೆ ಪಂಟಿಕೆ ಎಂಬ ಬೇರೆ ಬೇರೆ ಹೆಸುರುಗಳೂ ಇವೆ. ದೀಪಾವಳಿ ರೈತರಿಗೆ ದೊಡ್ಡ ಹಬ್ಬ. ಆ ಸಮಯದಲ್ಲಿ ಒಕ್ಕಲು ಮಕ್ಕಳು ಮೂರು ರಾತ್ರಿ ಮನೆ ಮನೆಗಳಿಗೆ ಹೋಗಿ ಈ ಬಿಂಗಿ ಪದಗಳನ್ನು ಹಾಡುತ್ತಾರೆ. ದೀಪಾವಳಿಯ ಹೊರತಾಗಿ ಬೇರೆ ಸಂದರ್ಭಗಳಲ್ಲಿ ಪದಗಳನ್ನು ಹಾಡಬಾರದೆಂದು ನಿಬಂಧವಿದೆ. ಕಾರಣಾಂತರಗಳಿಂದ ಯಾವುದಾದರೊಂದು ವರ್ಷ ಬಿಂಗಿಪದವನ್ನು ದೀಪಾವಳಿಯ ಸಂದರ್ಭದಲ್ಲಿ ಹಾಡಲಾಗದಿದ್ದರೆ ಮುಂದೆ ಏಳು ವರ್ಷಗಳ ತನಕ ಹಾಡಲಾಗದು.

	ದೀಪಾವಳಿಯ ಮೊದಲ ದಿನ ಊರಿನ ಒಕ್ಕಲು ಮಕ್ಕಳೆಲ್ಲ ಊರ ಮುಖಂಡನ ಮನೆಯಲ್ಲಿ ಇಲ್ಲವೇ ಊರ ದೇವಸ್ಥಾನದಲ್ಲಿ ಸೇರಿ, ದೇವರ ಮುಂದೆ ನಂದಾದೀಪ ಹೊತ್ತಿಸಿ, ದೇವರಿಗೆ ಪೂಜೆ ಸಲ್ಲಿಸಿ ಬಿಂಗಿ ಪದ ಹಾಡುವರು. ಆ ಮೇಲೆ ನಂದಾದೀಪದ ಕುಡಿಯಿಂದ ಅಂಚಿನ ಬಿಂಗಿದೀವಿಗೆಯನ್ನು ಹೊತ್ತಿಸಿಕೊಂಡು ಹತ್ತೆಂಟು ಜನ ಬೇರೆ ಬೇರೆ ಗುಂಪುಗಳಾಗಿ, ಊರಲ್ಲಿಯ ಮನೆ ಮನೆಗಳಿಗೆ ಭೇಟಿ ನೀಡಲು ಹೊರಡುತ್ತಾರೆ. ಈ ಸಂದರ್ಭದಲ್ಲಿ ಅವರು ಯಾವುದೇ ಬಗೆಯಗಿ ವಿಶಿಷ್ಟ ಉಡಿಗೆ ತೊಡಿಗೆಗಳನ್ನು ತೊಡುವುದಿಲ್ಲ. ದಿನನಿತ್ಯದ ಉಡಿಗೆಯಲ್ಲಿ, ಬಗಲಿಗೆ ಜೋಳಿಗೆ ಹಾಕಿ, ಕೈಯಲ್ಲಿ ಬಿಂಗಿದೀವಿಗೆ ಇಲ್ಲವೇ ದೊಂದಿಯನ್ನು ಹಿಡಿದು ಸಾಗುತ್ತಾರೆ. ಈ ಗುಂಪು ಮನೆಮನೆಗಳಿಗೆ ಸಾಗಿ ಬಾಗಿಲ ಮುಂದುಗಡೆ ನಿಂತು ಬಿಂಗ್ ಬಿಂಗ್ಯೋ ಎಂದೋ ದೀಪ್ ದೀಪೊಳ್ಗಿ ಮನೆಮನೆಗೊಂದು ಹೋಳ್ಗಿ ಎಂದು ಒಕ್ಕೊರಲಿನಿಂದ ಕೂಗಿ ಮನೆಯೊಡೆಯನನ್ನು ಎಬ್ಬಿಸುವರು. ಇಷ್ಟಕ್ಕೂ ಆತ ಏಳದಿದ್ದರೆ ಮತ್ತೆ ಮತ್ತೆ ಪದಗಳ ಎತ್ತುಗಡೆ ಮಾಡುವರು. 

         ಏ ಗಿಣಿಯೇ ಗಿಣಿಯೇ ಮುತ್ತೀನ ಬಾಗಿಣಿ ಬಾಗಿಣಿಯೇ   
	  ಕಂಚೀನ ಕದವೋ ತಾಮ್ರದ ಮೀಡೋ                   
         ಮಿಂಚೀನ ಮುಖದಾಕಿ ಕದತೆಗಿ 
         ಅಂದುಳ್ಳ ಮನೆಗೆ ಚಂದುಳ್ಳಿ ಕದವು 
         ಚಂದುಳ್ಳ ಕದಕೆ ರನ್ನನ ಮೀಡೋ  
         ಚಂದೀರನಂತಯ್ಯ ಕದ ತೆಗಿ

ಎಂದು ಹಾಡುವರು. ಈ ಸಂದರ್ಭದಲ್ಲಿ ಬಿಂಗಿಯವರನ್ನು ಮನೆಯ ಯಜಮಾನ ನಿರ್ಲಕ್ಷಿಸುವಂತಿಲ್ಲ. ಆದರದಿಂದ ಬರಮಾಡಿಕೊಳ್ಳಲೇಬೇಕು. ನಿರ್ಲಕ್ಷಿಸಿದರೆ ಬಿಂಗಿ ಪಂಗಡದವರು ಮಾವಿನ ಟೊಂಗೆಯೊಂದನ್ನು ಮನೆ ಬಾಗಿಲಿಗೆ ಸಿಕ್ಕಿಸಿ ಹೋಗುತ್ತಾರೆ. ಹೀಗೆ ಮಾಡಿದರೆ ಆ ಮನೆ ಮಂದಿ ಅನೇಕ ಬಗೆಯ ಸಂಕಷ್ಟಗಳಿಗೆ ಗುರಿಯಾಗುತ್ತಾರೆಂಬ ನಂಬಿಕೆ ಅವರದು. 

	ಮನೆಯ ಯಜಮಾನ ಬಿಂಗಿಯವರ ಒಲುಮೆಯ ಕರೆಗೆ ಓಗೊಟ್ಟು ಕದ ತೆರೆದು ಸ್ವಾಗತಿಸಿದ ಮೇಲೆ ಕಲಾತಂಡದವರು ಬಿಂಗಿ ದೀವಿಗೆಯನ್ನು ಮುಂದಿಟ್ಟುಕೊಂಡು ಸಾಲಾಗಿ ಕುಳಿತು ಹಾಡುವರು. ಪದದ ಆರಂಭವನ್ನು ಬಲಿ ಚಕ್ರವರ್ತಿಯ ಪದದಿಂದಲೇ ಮೊದಲು ಮಾಡುವರು. 

         ಬಲ್ಲಾಳಾ ಬಲಿಯೇಂದ್ರನೋ ರಾಜಾಕೇ ಸಿರಿವಂತನು 
         ಎಲ್ಲಾರಾ ಸಲುವಂತವನು 
         ಇಂದ್ರಾಲೋಕದಿಂದ ಬಲ್ಲಾಳಬರುವಾಗೆ 
	  ಕಲ್ಲಾಮಳಿಗಳು ಸುರಿದಾವು ಈ ಊರಾ
         ಹುಲ್ಲಾಗೆಡ್ಡೆಲ್ಲಾ ಚಿಗರಾವು ಈ ಊರಾ 	  
         ಬರಡಾಗೊಡ್ಡೆಲ್ಲಾ ಹಯನಾದು

	ಹೀಗೆ ಮನೆ ಮನೆಗಳಿಗೆ ಹೋಗಿ ಬಲೀಂದ್ರಾಗಮನದ ನೆನಪು ಮಾಡಿಕೊಟ್ಟು ಅವನ ಮಹಿಮಾಸ್ತುತಿ ಮಾಡುವರು. ಈ ಬಿಂಗಿಪದ ಬಲೀಂದ್ರನ ಆರಾಧನೆಗಾಗಿಯೇ ರೂಪುಗೊಂಡ ಕಲಾ ಸಂಪ್ರದಾಯವೆಂಬ ನಂಬಿಕೆ ಅನೇಕರಲ್ಲಿದೆ. ಈ ನಂಬಿಕೆಯನ್ನು ಬೆಂಬಲಿಸುವ ಕಥೆಯೊಂದಿದೆ. ಹಿಂದಕ್ಕೆ ಬಲಿಚಕ್ರವರ್ತಿ ಭೂ ಲೋಕಕ್ಕೆ ಭೇಟಿಯಿತ್ತಾಗ, ಬಿಲ್ಲಕ್ಷತ್ರಿಯರು ಭಕ್ತಿ ಭಾವದಿಂದ ಬಲೀಂದ್ರನಿಗೆ ನಮಸ್ಕರಿಸಿದರು. ತನ್ನ ಸ್ತುತಿಯನ್ನು ಜನ ದೀಪಾವಳಿಯ ಸಂದರ್ಭದಲ್ಲಿ ಮೂರು ದಿನ ಪರ್ಯಂತ ಮಾಡಿದರೆ ಅವರ ಅಭೀಷ್ಟಗಳು ನೆರವೇರುವುವು. ಗೋ, ಧನ, ಧಾನ್ಯ, ಸಂಪತ್ತು ಹೆಚ್ಚುವುದು ಎಂದು ಹರಸಿದನಂತೆ. ಧರ್ಮಸಿಂಧುವಿನಲ್ಲಿ ಕೂಡ ಬಲಿಯ ರಾಜ್ಯದಲ್ಲಿ ದೀಪ ಉರಿಸಿದರೆ ಅಲ್ಲಿ ಲಕ್ಷ್ಮಿ ನೆಲೆಸುವಳು ಎಂದು ಹೇಳಿದೆ. ಈ ನಂಬಿಕೆಯ ಹಿನ್ನೆಲೆಯಲ್ಲಿ, ದಾನಶೂರನಾಗಿ ಬೆಳಗಿದ ಬಲಿಯ ಕೀರ್ತಿಯ ಹೊಂಬೆಳಕನ್ನು ಮುಟ್ಟಿಸುವ ಕಾರಣಕ್ಕಾಗಿ ಈ ಕಲಾಸಂಪ್ರದಾಯ ಬೆಳೆದು ಬಂದಂತಿದೆ. 

	ಬಲಿಚಕ್ರವರ್ತಿಯ ಪದ ಹೇಳಿ ಮುಗಿದ ಬಳಿಕ ಹುಲಿ, ಕವ್ಲೆ, ಗಂಗೆಗೌರಿ, ಉತ್ತರದೇವಿ ಮುಂತಾದ ಪದ ಹೇಳಿ ಮನೆಯವರನ್ನೆಲ್ಲ ತೃಪ್ತಿಪಡಿಸುವರು. ಪದ ಹೇಳುವವರು ಇಬ್ಬರು ಮಾತ್ರ. ಉಳಿದವರು ಅವರು ಹೇಳಿದ ಪದದ ಉತ್ತರಾರ್ಧ ಮಾತ್ರ ಹೇಳುವರು. ಕೆಲವೊಮ್ಮೆ ಕೇವಲ ಹಾಡಿನ ಪಲ್ಲವಿ ಮಾತ್ರ ಹೇಳುವ ಪರಿಪಾಠವೂ ಉಂಟು. 

	ಪದ ಹೇಳಿ ಮುಗಿದ ಮೇಲೆ ಕಲಾವಿದರಿಗೆ ಹಬ್ಬದ ತಿಂಡಿ ತಿನಿಸು, ಹಣ, ಉಡುಗೊರೆಗಳು ಮನೆಯ ಯಜಮಾನನ ಯೋಗ್ಯತಾನುಸಾರ ಸಲ್ಲುವವು. ಅನಂತರ ಮನೆಯ ಯಜಮಾನ ಬಿಂಗಿದೀವಿಗೆಯನ್ನು ದೇವರ ಕೋಣೆಗೊಯ್ದು, ದೇವರ ಎದುರಿಗೆ ಉರಿಯುವ ದೀಪದ ಒಂದೆರಡು ನೆಣೆಗಳನ್ನು ಬಿಂಗಿದೀವಿಗೆಗೂ ಬಿಂಗಿದೀವಿಗೆಯ ಒಂದೆರಡು ನೆಣೆಗಳನ್ನು ದೇವರ ದೀಪಕ್ಕೂ ಬದಲಾಯಿಸಿ ಬಿಂಗಿ ದೀವಿಗೆಗೆ ಇನ್ನಷ್ಟು ಎಣ್ಣೆ ಹಾಕಿ ಕಳುಹಿಸುವನು. 

	ಮನೆಯಿಂದ ಹೊರಡುವಾಗಲೂ ಮತ್ತೆ ಬಿಂಗ್ ಬಿಂಗ್ಯೋ ಎಂದು ಕೂಗುತ್ತ ಹೋಗುವರು. ಹೀಗೆ ಹೋಗುವಾಗ ಬಿಂಗಿಯ ಇನ್ನೊಂದು ತಂಡದವರು ಎದುರಾದರೆ ಒಂದು ತಂಡದವರು ಮರೆಯಾಗಬೇಕು. ಒಂದು ತಂಡದವರು ಕಣ್ಮರೆಯಾದ ಮೇಲೆಯೇ ಇನ್ನೊಂದು ತಂಡದವರು ಮುಂದುವರಿಯಬೇಕು. ಒಂದು ಮನೆಯಲ್ಲಿ ಒಂದು ಪಂಗಡದವರು ಇದ್ದಾಗ ಇನ್ನೊಂದು ಪಂಗಡದವರು ಪ್ರವೇಶಿಸಕೂಡದು. ಆಕಸ್ಮಿಕ ಪ್ರವೇಶವಾದಲ್ಲಿ ಶತ್ರುತ್ವ ಘಟಿಸಿತೆಂದು ಎರಡೂ ತಂಡದವರು ಹೊಡೆದಾಡುವರು.  
											(ಎನ್.ಆರ್.ಎನ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ